Search form

ಮತ್ತಾಯನು 15

ಊಟದಿಂದ ಮನುಷ್ಯನು ಕೆಡುವುದಿಲ್ಲವೆಂದು ಯೇಸು ಬೋಧಿಸಿದ್ದು

(ಮಾರ್ಕ 7:1-23)

1ತರುವಾಯ ಯೆರೂಸಲೇಮಿನಿಂದ ಫರಿಸಾಯರೂ, ಶಾಸ್ತ್ರಿಗಳೂ ಯೇಸುವಿನ ಬಳಿಗೆ ಬಂದು, 2“ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ತಿನ್ನುವಾಗ ತಮ್ಮ ಕೈ ತೊಳೆದುಕೊಳ್ಳುವುದಿಲ್ಲ” ಎಂದು ಕೇಳಿದರು. 3ಅದಕ್ಕೆ ಆತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಏಕೆ ಉಲ್ಲಂಘಿಸುತ್ತೀರಿ? 4ಹೇಗಂದರೆ + ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ + ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ. 5ನೀವೋ, ‘ಯಾವನಾದರೂ ತನ್ನ ತಂದೆಯನಾಗಲಿ, ತಾಯಿಯಾನಾಗಲಿ, ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗೆ ಮುಡಿಪುಮಾಡಿದ್ದೇನೆ’ ಎಂದು ಹೇಳಿದರೆ, 6ಅವನು ‘ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾಗಿಲ್ಲ’ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ. 7ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿ ಪ್ರವಾದಿಸಿ, ಅವನು ಹೇಳಿರುವುದೇನೆಂದರೆ,

8+ “ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ

ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.

9ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಉಪದೇಶವಾಗಿ ಬೋಧಿಸುತ್ತಿರುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುವರು” ಎಂಬುದೇ.

10ಆ ಮೇಲೆ ಯೇಸು ಜನರ ಗುಂಪನ್ನು ಹತ್ತಿರಕ್ಕೆ ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ, 11ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು.

12ಆಗ ಶಿಷ್ಯರು ಬಂದು ಆತನನ್ನು, “ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ” ಎಂದು ಕೇಳಿದರು. 13ಅದಕ್ಕೆ ಆತನು “ಪರಲೋಕದ ನನ್ನ ತಂದೆಯು ನೆಡದೆ ಇರುವ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲ್ಪಡುವವು. 14ಅವರನ್ನು ಬಿಡಿರಿ, ಅವರು + ಕುರುಡರಿಗೆ ದಾರಿ ತೋರಿಸುವವರು ಕುರುಡರ ಹಾಗಿದ್ದಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯೊಳಗೆ ಬೀಳುವರು” ಅಂದನು. 15ಆಗ ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸಿ ಹೇಳು” ಅಂದನು, 16ಅದಕ್ಕೆ ಯೇಸು, “ನೀವೂ ಕೂಡಾ ಇನ್ನೂ ತಿಳಿವಳಿಕೆ ಇಲ್ಲದವರಾಗಿದ್ದೀರಾ? 17ಬಾಯೊಳಕ್ಕೆ ಹೋಗುವಂಥದ್ದು ಹೊಟ್ಟೆಯಲ್ಲಿ ಸೇರಿ ವಿಸರ್ಜಿತವಾಗುತ್ತದೆಂದು ನಿಮಗೆ ತಿಳಿಯಲಿಲ್ಲವೋ? 18ಆದರೆ ಬಾಯೊಳಗಿಂದ ಹೊರ ಬರುವಂಥವುಗಳು ಹೃದಯದಿಂದ ಬರುತ್ತವೆ. ಇವೇ ಮನುಷ್ಯನನ್ನು ಅಶುದ್ಧಿಮಾಡುವವು. 19ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ. 20ಇಂಥವುಗಳೇ ಮನುಷ್ಯನನ್ನು ಅಶುದ್ಧಿಗೊಳಿಸುತ್ತವೆ. ಆದರೆ ಕೈ ತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ.” ಅಂದನು.

ಕಾನಾನ್ಯ ಸ್ತ್ರೀಯ ನಂಬಿಕೆ

(ಮಾರ್ಕ 7:24-30)

21ಅನಂತರ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತಗಳಿಗೆ ಹೋದನು. 22ಆ ಸೀಮೆಯಿಂದ ಕಾನಾನ್ಯಳಾದ ಸ್ತ್ರೀಯೊಬ್ಬಳು ಹೊರಟು ಬಂದು, “ಕರ್ತನೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣೆಯಿಡು, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಯಾತನೆಪಡುತ್ತಿದ್ದಾಳೆ” ಎಂದು ಕೂಗಿಕೊಂಡಳು. 23ಆದರೆ ಆತನು ಆಕೆಗೆ ಏನೂ ಉತ್ತರ ಕೊಡಲಿಲ್ಲ. ಆಗ ಆತನ ಶಿಷ್ಯರು ಬಂದು, “ಅವಳು ನಮ್ಮ ಹಿಂದೆ ಕೂಗಿಕೊಂಡು ಬರುತ್ತಿದ್ದಾಳೆ. ಆಕೆಯನ್ನು ಕಳುಹಿಸಿಬಿಡು” ಎಂದು ಆತನನ್ನು ಬೇಡಿಕೊಂಡರು. 24ಆದರೆ ಯೇಸು ಹೇಳಿದ್ದೇನೆಂದರೆ + “ಕಳೆದುಹೋದ ಕುರಿಗಳಂತಿರುವ ಇಸ್ರಾಯೇಲ್ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ” ಅಂದನು. 25ಆಗ ಆಕೆ ಬಂದು ಆತನ ಮುಂದೆ ಅಡ್ಡ ಬಿದ್ದು, “ಕರ್ತನೇ ನನಗೆ ಸಹಾಯಮಾಡು” ಅಂದಳು. 26ಅದಕ್ಕಾತನು, “ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಉತ್ತರಕೊಟ್ಟನು. 27ಆಕೆಯು, “ಹೌದು, ಕರ್ತನೇ, ಆದರೆ ನಾಯಿಮರಿಗಳಂತೂ ತಮ್ಮ ಯಜಮಾನನ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ” ಅಂದಳು. 28ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು.

ಯೇಸು ಅನೇಕರನ್ನು ಸ್ವಸ್ಥಮಾಡಿದ್ದು

29ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಬಳಿಗೆ ಬಂದನು. ಆಗ ಆತನು ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡನು. 30ಆಗ ಜನರು ದೊಡ್ಡ ಗುಂಪುಗಳಾಗಿ ಆತನ ಬಳಿಗೆ ಬಂದುದಲ್ಲದೆ ಕುಂಟರು, ಕುರುಡರು, ಮೂಕರು, ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ತಮ್ಮೊಂದಿಗೆ ಕರೆತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು. ಆತನು ಅವರನ್ನು ಸ್ವಸ್ಥಮಾಡಿದನು. 31ಮೂಕರಾಗಿದ್ದವರು ಮಾತನಾಡುವುದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ, ಕುಂಟರು ನಡೆದಾಡುವುದನ್ನೂ, ಕುರುಡರು ನೋಡುವುದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ಯರ ದೇವರನ್ನು ಕೊಂಡಾಡಿದರು.

ನಾಲ್ಕು ಸಾವಿರ ಜನರಿಗೆ ಊಟಮಾಡಿಸಿದ್ದು

(ಮಾರ್ಕ 8:1-10)

32ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ನಾನು ಈ ಜನರನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಅವರು ಮೂರು ದಿನಗಳಿಂದಲೂ ನನ್ನ ಜೊತೆಯಲ್ಲಿದ್ದಾರೆ. ಅವರಿಗೆ ತಿನ್ನುವುದಕ್ಕೆ ಏನೂ ಇಲ್ಲ. ಅವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಇಷ್ಟವಿಲ್ಲ. ಅವರು ದಾರಿಯಲ್ಲಿ ಬಳಲಿ ಹೋದಾರು” ಎಂದು ಹೇಳಿದನು. 33ಶಿಷ್ಯರು ಆತನಿಗೆ, “ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿಯು ಈ ಅಡವಿಯಲ್ಲಿ ನಮಗೆ ಎಲ್ಲಿಂದ ಸಿಕ್ಕೀತು?” ಎಂದು ಹೇಳಿದರು. 34ಅದಕ್ಕೆ ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳು ಅವೆ” ಅಂದರು. 35ಆಗ ಆತನು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳಿರಿ ಎಂದು ಅಪ್ಪಣೆ ಕೊಟ್ಟನು. 36ಆತನು ಆ ಏಳು ರೊಟ್ಟಿಗಳನ್ನೂ ಆ ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಹಂಚಿಕೊಟ್ಟರು. 37ಆ ಜನರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು. 38ಊಟಮಾಡಿದವರು ಹೆಂಗಸರು ಮಕ್ಕಳು ಅಲ್ಲದೆ ಗಂಡಸರೇ ನಾಲ್ಕು ಸಾವಿರವಿದ್ದರು. 39ತರುವಾಯ ಆತನು ಆ ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಸೀಮೆಗೆ ಹೋದನು.

ಕನ್ನಡ ಬೈಬಲ್

© 2017 Bridge Connectivity Solutions. Released under the Creative Commons Attribution Share-Alike license 4.0.

More Info | Version Index